ಆಬ್‍ಸಿಡಿಯನ್-
ಜ್ವಾಲಾಮುಖಜ ಶಿಲಾವರ್ಗಕ್ಕೆ ಸೇರಿದ ಸ್ವಾಭಾವಿಕ ಗಾಜು. ಲಾವಾರಸ ಪರಿವರ್ತನೆಯಿಂದಾದುದು. ಇದರಲ್ಲಿ 65%ರಿಂದ 75% ಸಿಲಿಕಾಂಶ ಇರುತ್ತದೆ. 

	ಈ ಶಿಲೆ ರ್ಹಯೋಲೈಟ್ ಮತ್ತು ಡೇಸೈಟ್ ಶಿಲೆಗಳ ಖನಿಜ ಸಂಯೋಗವನ್ನು ಹೊಂದಿದೆ. ಆದರೆ ಇದರ ಉತ್ಪತ್ತಿಯ ರೀತಿ ಆ ಶಿಲೆಗಳ ಉತ್ಪತ್ತಿಯ ರೀತಿಗಿಂತ ಬೇರೆಯದಾಗಿದೆ. ಆ ಎರಡೂ ಶಿಲೆಗಳಲ್ಲಿ ಕಾಣುವ ಪಾರ್‍ಫಿರಿಟಿಕ್ ರಚನೆ ಇದಕ್ಕಿಲ್ಲ. ಇದು ಪ್ರಕೃತಿನಿರ್ಮಿತವಾದ ಗಾಜು. ಆದ್ದರಿಂದ ಇದರಲ್ಲಿ ಯಾವ ಖನಿಜ ಹರಳುಗಳು ಇಲ್ಲ. ಹೊಳೆಯುವ ಅತಿ ಕಪ್ಪು ಬಣ್ಣದ ಈ ಕಲ್ಲಿನ ಮೈ ಶಂಖಾಕೃತಿಯಲ್ಲಿ ಬಿರಿದಿರುವಂತೆ ಕಾಣುತ್ತದೆ. 

	ಇದರ ಉತ್ಪತ್ತಿಗೆ ಕಾರಣವಾದ ಶಿಲಾರಸ ಬಹಳ ಜಿಗುಟಾಗಿದ್ದು ಪ್ರವಾಹ ನಿರೋಧಕವಾಗಿರುತ್ತದೆ. ಶಿಲಾರಸದಲ್ಲಿ 4% ಕ್ಕಿಂತ ಹೆಚ್ಚು ನೀರಿನ ಭಾಗವಿರುವುದಿಲ್ಲ. ಈ ಕಾರಣದಿಂದಾಗಿ ಶಿಲಾರಸ ಭೂಮಿಯ ಹೊರಕ್ಕೆ ಬಂದೊಡನೆಯೇ ಬಹಳ ಬೇಗ ಹೆಪ್ಪುಗಟ್ಟುತ್ತದಾಗಿ ಈ ಶಿಲೆಯ ಅತಿ ತೆಳುವಾದ ಭಾಗಗಳಿಂದ ಮತ್ತು ಮೊನಚಾದ ಅಂಚುಗಳಿಂದ ಬೆಳಕು ಹರಿಯುವುದನ್ನು ಕಾಣಬಹುದು. ಈ ಗಾಜಿನ ಒಳರಚನೆಯಲ್ಲಿ ಬೇರೆ ಬೇರೆ ಖನಿಜಗಳು ಕಣ್ಣಿಗೆ ಕಾಣುವ ಸ್ಫಟಿಕಗಳಾಗಿರದೆ ಕ್ರಸ್ಟ-ಲೋಟ್ ಮತ್ತು ಮೈಕ್ರೊಲೈಟ್ ಎಂಬ ಬಹು ಸೂಕ್ಷ್ಮ ಕಣಗಳಾಗಿರುತ್ತವೆ. 

	ಈ ಶಿಲೆ ಭೂ ಚರಿತ್ರೆಯ ಮಿಸೋeóÉೂೀಯಿಕ್, ಟರ್‍ಷಿಯರಿ ಮತ್ತು ಇತ್ತೀಚಿನ ಯುಗಗಳಲ್ಲಿ ಸಿಕ್ಕುತ್ತದೆ. ಪ್ರಿಕೇಂಬ್ರಿಯನ್ ಕಾಲದಲ್ಲೂ ಹಲ ಕೆಲವು ಶಿಲೆಗಳು ಸಿಕ್ಕಿವೆ. 								
(ಐ.ಆರ್.ವಿ.)

  	ಪ್ರಾಗೈತಿಹಾಸಿಕ ಯುಗದಲ್ಲಿ ಶಿಲಾಯುಧಗಳನ್ನು ಮಾಡಲು ಈಜಿಪ್ಟ್, ಅಮೆರಿಕ ಮುಂತಾದ ದೇಶಗಳಲ್ಲಿ ಇದು ಬಹಳ ಬಳಕೆಯಲ್ಲಿತ್ತು. 											
(ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ